ಕನ್ನೆಕುಡಿ (ಸೊರಲೆಕುಡಿ) ಕಟ್ನೆ

ಕನ್ನೆಕುಡಿ ಅಥವಾ ಸೊರಲೆಕುಡಿ ಎಂದರೆ ಮಲೆನಾಡ ಕಡೆ ಅಡಿಗೆಗೆ ಬಳಸುವ ಒಂದು ಬಗೆಯ ಎಲೆ. ಈ ಗಿಡದ ವೈಜ್ಞಾನಿಕ ಹೆಸರು ನನಗೆ ತಿಳಿಯದು. ಇದರ ಗಿಡ ಚಿಕ್ಕ ಪೊದೆಯಂತೆ ಇರುತ್ತದೆ. ಮಳೆಗಾಲದ ಸಮಯದಲ್ಲಿ ಇದರ ಅಡಿಗೆಗಳನ್ನು ಹೆಚ್ಚಾಗಿ ತಯಾರಿಸುತ್ತಾರೆ. ಶೀತ, ಜ್ವರ ಇತ್ಯಾದಿ ಅನಾರೋಗ್ಯ ಕಾಡಿದಾಗ ಕನ್ನೆಕುಡಿಯ ಕಟ್ನೆ ಮಾಡಿಕೊಂಡು ಉಣ್ಣುವುದು ಆರೋಗ್ಯದ ದೃಷ್ಟಿಯಿಂದ ತುಂಬ ಒಳ್ಳೆಯದು.  
ಕನ್ನೆಕುಡಿಯ ಕಟ್ನೆ ಊಟಕ್ಕೆ ತುಂಬ ರುಚಿ. ಕನ್ನೆಕುಡಿಯ ಬದಲು ಪಾಲಕ್ ಸೊಪ್ಪನ್ನು ಬಳಸಿಯೂ ಕಟ್ನೆ ತಯಾರಿಸಬಹುದು.

ತಯಾರಿಸಲು ಬೇಕಾಗುವ ಸಮಯ: 20 - 25 ನಿಮಿಷಗಳು 
ಸರ್ವಿಂಗ್ಸ್ - 4 ಜನರಿಗೆ ಆಗುತ್ತದೆ

ಬೇಕಾಗುವ ಸಾಮಗ್ರಿಗಳು:
ಕನ್ನೆಕುಡಿ (ಸೊರಲೆಕುಡಿ) - 25 ಎಲೆಗಳು
ಕಾಳುಮೆಣಸು - 15 
ಜೀರಿಗೆ - 3/4 ಚಮಚ 
ಒಗ್ಗರಣೆಗೆ ಎಣ್ಣೆ 
ಬೆಳ್ಳುಳ್ಳಿ 7 - 8 ಎಸಳು 
ಸಾಸಿವೆ - 1/4 ಚಮಚ 
ರುಚಿಗೆ ತಕ್ಕಷ್ಟು ಉಪ್ಪು
ನಿಂಬೆಹಣ್ಣು - 1 
ತೆಂಗಿನತುರಿ - 1 ಕಪ್

ಮಾಡುವ ವಿಧಾನ:
ಕನ್ನೆಕುಡಿ ಎಲೆಗಳನ್ನು ಚೆನ್ನಾಗಿ ತೊಳೆದುಕೊಂಡು ತೊಟ್ಟು ಮತ್ತು ಎಲೆಯಲ್ಲಿರುವ ನಾರನ್ನು ತೆಗೆದುಬಿಡಿ.
ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಕಾಯಿಸಿ ಕಾಳುಮೆಣಸು ಹಾಕಿ ಚಟಪಟ ಸದ್ದು ಬರುವವರೆಗೆ ಹುರಿಯಿರಿ. 
ನಂತರ ಜೀರಿಗೆ ಸೇರಿಸಿ ಒಮ್ಮೆ ಕೈಯಾಡಿಸಿ, ಕನ್ನೆಕುಡಿ ಎಲೆಗಳನ್ನು ಸೇರಿಸಿ 2 - 3 ನಿಮಿಷ ಬಾಡಿಸಿ. ಎಲೆಗಳ ಬಣ್ಣ ಬದಲಾಗುತ್ತಿದ್ದಂತೆ ಉರಿಯನ್ನು ಆಫ್ ಮಾಡಿ. 
ಹುರಿದ ಸಾಮಗ್ರಿಗಳನ್ನು ತೆಂಗಿನತುರಿಯೊಡನೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ.    
ರುಬ್ಬಿದ ಮಿಶ್ರಣಕ್ಕೆ 3 - 4 ಕಪ್ ನೀರು ಸೇರಿಸಿ ತೆಳ್ಳಗೆ ಮಾಡಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 5 ನಿಮಿಷ ಚೆನ್ನಾಗಿ ಕುದಿಸಿ.
ಕುದಿಸಿ ಇಳಿಸಿದ ನಂತರ ನಿಂಬೆರಸ ಸೇರಿಸಿ. ನಂತರ ಇದಕ್ಕೆ ಸಾಸಿವೆ ಮತ್ತು ಜಜ್ಜಿದ ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಿ. 
ಬಿಸಿ ಕಟ್ನೆಯನ್ನು ಅನ್ನದೊಡನೆ ಸರ್ವ್ ಮಾಡಿ. ಇದು ಊಟಕ್ಕೂ ರುಚಿ, ಆರೋಗ್ಯಕ್ಕೂ ಹಿತಕರ.

ಟಿಪ್ಸ್:
ನಿಂಬೆರಸದ ಬದಲು ಆಮ್ ಚೂರ್ ಪೌಡರ್ ನ್ನೂ ಬಳಸಬಹುದು. ಆದರೆ ನಿಂಬೆರಸ ಬಳಸುವುದರಿಂದ ಕಟ್ನೆಗೆ ವಿಶೇಷ ಪರಿಮಳ ಬರುತ್ತದೆ.

By : Vani Hegde (http://vanilohit.blogspot.in)

No comments:

Post a Comment